ಕ್ರೈಸಲಿಡೋಕಾರ್ಪಸ್

	ಪಾಮೇಸೀ ಅಥವಾ ಅರಿಕೇಸೀ ಕುಟುಂಬಕ್ಕೆ ಸೇರಿದ ಒಂದು ಅಲಂಕಾರ ಸಸ್ಯಜಾತಿ. ಇದರಲ್ಲಿ ಸುಮಾರು 20 ಪ್ರಭೇದಗಳಿದ್ದರೂ ಲ್ಯೂಟಸೆನ್ಸ್ ಪ್ರಭೇದವೇ ಬಲು ಮುಖ್ಯವಾದುದು. ಬಿಲ್ಲಿನಂತೆ ಬಾಗಿದ ಗರಿರೂಪದ ಎಲೆಗಳಿಂದಾಗಿ ಬಲು ರಮ್ಯವಾಗಿ ಕಾಣುವ ಇದನ್ನು ಉದ್ಯಾನಗಳ ಪಸಲೆಗಳಲ್ಲಿ (ಲಾನ್) ಮತ್ತು ಕುಂಡಗಳಲ್ಲಿ ಶೋಭೆಗೆಂದು ಬೆಳೆಸುತ್ತಾರೆ.

	ಇದು ಬಾಹ್ಯರಚನೆಯಲ್ಲಿ ಅಡಿಕೆಮರವನ್ನು ಹೆಚ್ಚು ಕಡಿಮೆ ಹೋಲುತ್ತದೆ. ಆದರೆ ಅಡಿಕೆ ಮರದಷ್ಟು ದಪ್ಪವಾಗಲಿ ಎತ್ತರವಾಗಲಿ ಇಲ್ಲ. ಅಡಿಕೆ ಮರದಲ್ಲಿ ಮುಖ್ಯ ಕಾಂಡವೊಂದೇ ಇದೆ. ಆದರೆ ಇದರಲ್ಲಿ ಗಿಡದ ಬುಡದಿಂದ ಅನೇಕ ರೆಂಬೆಗಳು ಹೊರಡುತ್ತವೆ. ಇದರಿಂದ ಗಿಡ ಚಿಕ್ಕ ಬಿದಿರು ಪೊದೆಯಂತೆ ಕಾಣುತ್ತದೆ. ರೆಂಬೆಗಳ ಬುಡದಿಂದ ಹಲವಾರು ಗರಿರೂಪದ ಎಲೆಗಳು ಹುಟ್ಟುತ್ತವೆ. ಒಂದೊಂದು ಎಲೆಯೂ ಸುಮಾರು 4'-6' ಉದ್ದ ಮತ್ತು 3' ಅಗಲ ಇದೆ. ಪ್ರತಿಯೊಂದು ಎಲೆಯಲ್ಲೂ 40-60 ಕಿರು ಎಲೆಗಳಿವೆ. ಹೂಗೊಂಚಲು ಕದಿರುಗುಚ್ಛ ಮಾದರಿಯದು; ಹೂಗಳು ಏಕಲಿಂಗಿಗಳು. ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ.

	ಕ್ರೆಸಲಿಡೋಕಾರ್ಪಸ್ ಸಸ್ಯವನ್ನು ಬೀಜಗಳ ಮೂಲಕ ವೃದ್ಧಿಸಲಾಗುತ್ತದೆ. ಸಣ್ಣ ಪೆಟ್ಟಿಗೆಗಳಲ್ಲಿ ಇಲ್ಲವೆ ತಟ್ಟೆಗಳಲ್ಲಿ ಬಿತ್ತಿ ಇವುಗಳಿಂದ ಮೊಳೆಯುವ ಸಸಿಗಳು ಎರಡು ಎಲೆಗಳನ್ನು ಉತ್ಪಾದಿಸುವವರೆಗೂ ಹಾಗೆಯೆ ಬಿಟ್ಟಿದ್ದು ಅನಂತರ ಎಚ್ಚರಿಕೆಯಿಂದ ಸಸಿಗಳನ್ನು ಬೇರೆಡೆಗೆ ವರ್ಗಾಯಿಸಲಾಗುತ್ತದೆ. ಹೀಗೆ ಸಸಿಗಳನ್ನು ಕೀಳಲು ಅನುಕೂಲವಾಗುವಂತೆ ಪೆಟ್ಟಿಗೆಗಳ ತಳದಲ್ಲಿ ಕೊಂಚ ಕಂಕರೆಯನ್ನು ಹಾಕಬೇಕು. ಕಿತ್ತಬಳಿಕ ಬೇರುಗಳನ್ನು ಚೆನ್ನಾಗಿ ತೊಳೆದು ಸ್ವಲ್ಪ ತೇವವಿರುವ ಮಣ್ಣಿನಲ್ಲಿ ನೆಟ್ಟು, ಆಮೇಲೆ ಕೆಲವು ಕಾಲ ಹೆಚ್ಚು ಉಷ್ಣತೆ ಹಾಗೂ ತೇವಾಂಶವಿರುವ ಪರಿಸರದಲ್ಲಿ ಗಿಡಗಳನ್ನು ಇಡಬೇಕು. ಬಿಸಿಲು ನೇರವಾಗಿ ಬೀಳದಂತೆ ಕಾಪಾಡಬೇಕು. 
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ